ಅಭಿಪ್ರಾಯ / ಸಲಹೆಗಳು

ಇಲಾಖಾ ಪರಿಚಯ

        ಸಾಮಾನ್ಯವಾಗಿ ಪತ್ರಾಗಾರಗಳು ನಿರಂತರ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಮೌಲ್ಯದ ಆಧಾರದ ಮೇಲೆ ಶಾಶ್ವತ ಅಥವಾ ದೀರ್ಘಕಾಲೀನ ಸಂರಕ್ಷಣೆಗಾಗಿ ಆಯ್ಕೆ ಮಾಡಲಾದ ದಾಖಲೆಗಳನ್ನು ಒಳಗೊಂಡಿರುತ್ತವೆ. ಅವುಗಳು ಪುಸ್ತಕ ಮತ್ತು ನಿಯತಕಾಲಿಕೆಗಳಿಗಿಂತ ಭಿನ್ನವಾಗಿರುತ್ತವೆ. ದಾಖಲೆಗಳು ಅಥವಾ ದಾಖಲೆಗಳ ಕಛೇರಿ  ಎಂದೂ ಕರೆಯಲ್ಪಡುವ ಪತ್ರಾಗಾರ ಸಾರ್ವಜನಿಕ, ಅರೆಸಾರ್ವಜನಿಕ, ಸಾಂಸ್ಥಿಕ, ವ್ಯವಹಾರ ಘಟಕವು ತನ್ನ ವ್ಯವಹಾರಗಳ ವಹಿವಾಟಿನಲ್ಲಿ ಸೃಷ್ಠಿಸಿದ ಅಥವಾ ಸ್ವೀಕರಿಸಿದ ದಾಖಲೆಗಳ ಸಂಘಟಿತ ಸಂಸ್ಥೆಯ ಭಂಡಾರವಾಗಿ ಸಂರಕ್ಷಿಸುವ ಕಾರ್ಯ ನಿರ್ವಹಿಸುತ್ತದೆ.

    ಅಧಿಕೃತ ದಾಖಲೆಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಬಹಳ ಹಳೆಯದು. ಪ್ರಾಚೀನ ಕಾಲದ ಚೈನೀಸ್, ಗ್ರೀಕರು ಮತ್ತು ಪ್ರಾಚೀನ ರೋಮನ್ನರು (ಅವರನ್ನು ಟಬುಲೇರಿಯಾ ಎಂದು ಕರೆಯುವರು) ಪತ್ರಾಗಾರ ಕಛೇರಿಗಳನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದರು. ಚರ್ಚುಗಳು, ಸಾಮ್ರಾಜ್ಯಗಳು ಮತ್ತು ಮಧ್ಯಯುಗದ ನಗರಗಳ ದಾಖಲೆಗಳ ಕಛೇರಿಗಳು ಈಗಲೂ ಕೆಲವೊಂದು ಉಳಿದುಕೊಂಡಿವೆ. ಕ್ರಿ.ಶ 1066ರ ನಂತರ ಇಂಗ್ಲೆಂಡ್ ಪತ್ರಾಗಾರ ಮತ್ತು ಆರ್ಕೈವಲ್ ಸಂಶೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಿತು. ಕ್ರಿ.ಶ 1450ರ ನಂತರ ಸ್ವಿಸ್ ಆರ್ಕೈವಲ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿತು. ಆಧುನಿಕ ಪತ್ರಾಗಾರ ಚಿಂತನೆಯು ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತಗೊಂಡಿದೆ. ವಿಶ್ವದ ಅತಿದೊಡ್ಡ ದಾಖಲೆಗಳ ಸಂಗ್ರಹವನ್ನು ಹೊಂದಿರುವ ಫ್ರೆಂಚ್ ನ್ಯಾಷನಲ್ ಆರ್ಕೈವ್ಸ್, 1790ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಕ್ರಾಂತಿಕಾರಿಗಳು ವಶಪಡಿಸಿಕೊಂಡ ವಿವಿಧ ಸರ್ಕಾರಿ, ಧಾರ್ಮಿಕ ಮತ್ತು ಖಾಸಗಿ ದಾಖಲೆಗಳನ್ನು ಸಂಗ್ರಹಿಸಿದೆ. 1789ರಲ್ಲಿ ನ್ಯಾಷನಲ್ಸ್ ಆರ್ಕೈವ್ಸ್ ಮತ್ತು 1796ರಲ್ಲಿ ಆರ್ಕೈವ್ಸ್ ಡಿಪಾರ್ಟ್ಮೆಂಟ್ ಸ್ಥಾಪನೆಯೊಂದಿಗೆ, ಮೊದಲ ಬಾರಿಗೆ ದಾಖಲೆ ಕಛೇರಿಗಳ ಏಕೀಕೃತ ಆಡಳಿತವು ಅಸ್ತಿತ್ವಕ್ಕೆ ಬಂದಿತ್ತು. 1838ರ ಇಂಗ್ಲಿಷ್ ಪಬ್ಲಿಕ್ ರೆಕಾರ್ಡ್ ಆಕ್ಟ್ ಎಲ್ಲಾ ಪ್ರತ್ಯೇಕ ಸಂಗ್ರಹಗಳನ್ನು ಒಟ್ಟುಗೂಡಿಸಿತು ಮತ್ತು ಅವುಗಳನ್ನು ಸಾರ್ವಜನಿಕ ದಾಖಲೆ ಕಚೇರಿಯ ಅಡಿಯ ವ್ಯಾಪ್ತಿಗೆ ಒಳಪಡಿಸಿತು.

    20ನೇ ಶತಮಾನದಲ್ಲಿ ಛಾಯಾಗ್ರಹಣದ ದಾಖಲೆಗಳು, ಚಲನಚಿತ್ರಗಳು, ಧ್ವನಿ ರೆಕಾರ್ಡಿಂಗ್‌ಗಳು ಮತ್ತು ಗಣಕಯಂತ್ರಗಳಲ್ಲಿ ಇರಿಸಲಾದ ದಾಖಲೆಗಳಂತಹ ಹೊಸ ರೀತಿಯ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಪತ್ರಾಗಾರಗಳು ನಿರತವಾಗಿವೆ ಮತ್ತು ಅವುಗಳನ್ನು ಆಧುನಿಕ ಸಂರಕ್ಷಣಾ ವಿಧಾನದಲ್ಲಿ ರಕ್ಷಿಸುತ್ತಿವೆಬ್ರಿಟಿಷ್ ಭಾರತದ ರಾಜಧಾನಿಯಾದ ಕಲ್ಕತ್ತಾದಲ್ಲಿ 1891ರ ಮಾರ್ಚ್ 11ರಂದು ಇಂಪೀರಿಯಲ್ ರೆಕಾರ್ಡ್ ಇಲಾಖೆ ಎಂಬ ಹೆಸರಿನಲ್ಲಿ ಭಾರತದಲ್ಲಿ ಪ್ರಥಮವಾಗಿ ಪತ್ರಾಗಾರ ಇಲಾಖೆ ಸ್ಥಾಪಿಸಲ್ಪಟ್ಟಿತ್ತು. (ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ). 1911ರಲ್ಲಿ ಕಲ್ಕತ್ತಾದಿಂದ (ಕೋಲ್ಕತಾ) ನವದೆಹಲಿಗೆ ಅದು ವರ್ಗಾವಣೆಯಾಯಿತು. ಸ್ವಾತಂತ್ರ್ಯದ ನಂತರ ಐ.ಆರ್‌.ಡಿ.ಯನ್ನು ರಾಷ್ಟ್ರೀಯ ಪತ್ರಾಗಾರ ಇಲಾಖೆ (ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ) ಎಂದು ಮರುನಾಮಕರಣ ಮಾಡಲಾಯಿತು.

      1966ರಲ್ಲಿ ಭಾರತೀಯ ಐತಿಹಾಸಿಕ ದಾಖಲೆಗಳ ಆಯೋಗ ಸಾಮಾನ್ಯ ಗೊತ್ತುವಳಿಯನ್ನು ಅಂಗೀಕರಿಸುವ ಮೂಲಕ ಭಾರತದ ಎಲ್ಲ ರಾಜ್ಯಗಳಲ್ಲಿ ದಾಖಲೆಗಳ ಕೇಂದ್ರ ಕಛೇರಿಯನ್ನು ತೆರೆಯಬೇಕೆಂಬ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಅದರಲ್ಲೂ ಮೈಸೂರು ಸರ್ಕಾರಕ್ಕೆ ಸಂಬಂಧಿಸಿದಂತೆ ವಿಶೇಷ ಗೊತ್ತುವಳಿಯನ್ನು ಮಂಡಿಸಿ ವ್ಯವಸ್ಥಿತ ಪೂರ್ಣ ಪ್ರಮಾಣದ ತನ್ನದೇ ಆದ ಪತ್ರಾಗಾರವನ್ನು ರಾಜ್ಯದಲ್ಲಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿತು. ಯೋಜನೆಯ ಸಮಗ್ರ ಪರಿಶೀಲನೆಯ ನಂತರ ಕರ್ನಾಟಕ ಸರ್ಕಾರ ‘ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯ’ ಎಂಬ ಇಲಾಖೆಯ ಸ್ಥಾಪನೆಯನ್ನು ಅನುಮೋದಿಸಿ, ಆದೇಶ ಸಂ:ಇಡಿ 29 ಎಂ.ಎಸ್.ಸಿ 73 ದಿ:17 ಡಿಸೆಂಬರ್, 1973ರಲ್ಲಿ ಆದೇಶ ಹೊರಡಿಸಿತು. ಸದರಿ ಆದೇಶದಲ್ಲಿ ನಿರ್ದೇಶಕರ ಕರ್ತವ್ಯಗಳು, ಆರ್ಥಿಕ ಹಾಗೂ ಆಡಳಿತಾತ್ಮಕ ಅಧಿಕಾರಗಳನ್ನು ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. 1976ರಲ್ಲಿ ರಾಜ್ಯ ಪತ್ರಾಗಾರ ನಿರ್ದೇಶಕರಿಗೆ ಹೆಚ್ಚುವರಿ ಅಧಿಕಾರವನ್ನು ನೀಡಲಾಯಿತು. ಜೂನ್ 1976ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸೃಜಿಸಿ, ಅನುಮೋದಿಸಲಾಯಿತು. ತದನಂತರ ಹುದ್ದೆಗಳ ಸಂಖ್ಯೆ, ವೇತನ ಶ‍್ರೇಣಿ, ಬಡ್ತಿ, ನೇಮಕಾತಿ ನಿಯಮಗಳು ಇತ್ಯಾದಿಗಳ ಬಗ್ಗೆ ಹಂತ-ಹಂತವಾಗಿ ಹಲವು ಬದಲಾವಣೆಗಳು ಜಾರಿಗೆ ಬಂದವು.

      ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಸರ್ಕಾರದ ಚಾಲ್ತಿ ಹಾಗೂ ಅರೆಚಾಲ್ತಿ ಸಚಿವಾಲಯದ (“ಎ”ವರ್ಗದ) ಕಡತಗಳು, ರಾಜ್ಯ ಪತ್ರಗಳು, ನಡವಳಿಗಳು, ಆದೇಶ ಪ್ರತಿಗಳು, ವಾರ್ಷಿಕ ವರದಿಗಳು, ವಿಧಾನ ಸಭೆ ಮತ್ತು ಪರಿಷತ್ತಿನ ಸದಸ್ಯರ ಭಾಷಣಗಳು, ಕಾರ್ಯಕಲಾಪಗಳ ವರದಿಗಳು, ನಕ್ಷೆಗಳು ಮೊದಲಾದ ಸರ್ಕಾರಿ ದಾಖಲೆಗಳ ಜೊತೆಯಲ್ಲಿ ಖಾಸಗಿ ಸಂಘ-ಸಂಸ್ಥೆ ಮತ್ತು ವ್ಯಕ್ತಿಗಳ ಬಳಿಯಿರುವ ಐತಿಹಾಸಿಕ  ದಾಖಲೆಗಳು, ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಗಣ್ಯವ್ಯಕ್ತಿಗಳ ಧ್ವನಿ ಇತಿಹಾಸ, ಛಾಯಚಿತ್ರಗಳು, ಕಾಗದ-ಪತ್ರಗಳು, ದಿನಪತ್ರಿಕೆಗಳು, ಹಸ್ತಪ್ರತಿಗಳು, ಕಡತಗಳನ್ನು ಪಡೆದು, ದಾಖಲೆಗಳನ್ನು ಕೊಟ್ಟವರ ಹೆಸರಿನಲ್ಲಿ ಸಂರಕ್ಷಣೆ ಮಾಡುತ್ತಿದೆ. ರಾಜ್ಯ ಪತ್ರಾಗಾರ ಇಲಾಖೆ ಮೈಸೂರು ಒಡೆಯರ ಆಡಳಿತದ ಅವಧಿಯ ದಾಖಲೆಗಳನ್ನೂ ಒಳಗೊಂಡಂತೆ ಪ್ರಸ್ತುತ ಸರ್ಕಾರದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿದೆ. ಈ ಸಂಗ್ರಹ ದಾಖಲೆಗಳನ್ನು ಆಡಳಿತಗಾರರು, ವಿದ್ವಾಂಸರು, ಸಂಶೋಧಕರು, ಸಾರ್ವಜನಿಕರಿಗೆ ಕೋರಿಕೆಯ ಮೇರೆಗೆ ನಕಲು ಪ್ರತಿಗಳನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರದ ಅಧಿನದಲ್ಲಿ ಬರುವ ಎಲ್ಲಾ ಇಲಾಖೆಗಳಲ್ಲಿರುವ ಕಡತ ಅಥವಾ ದಾಖಲೆಗಳ ಆಡಳಿತ ನಿರ್ವಹಣೆಗಾಗಿ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಹಾಗೂ ನಿಯಮಗಳು 2013ನ್ನು ಸಿದ್ದಪಡಿಸಿ ಜಾರಿಗೆ ತರಲಾಗಿದೆ. ಪತ್ರಾಗಾರ ಇಲಾಖೆ ಸಚಿವಾಲಯದ ಎಲ್ಲಾ ಇಲಾಖೆಗಳ ಸಿ ಮತ್ತು ಬಿ ವರ್ಗದ ಕಡತಗಳ ನಿರ್ವಹಣೆಯನ್ನು ಸದರಿ ಅಧಿನಿಯಮದಡಿಯಲ್ಲಿ ನಿರ್ವಹಿಸುತ್ತಿದೆ.

      ಇಲಾಖೆಯು ದಾಖಲೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಒದಗಿಸುವಲ್ಲಿ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಲಾನುಕ್ರಮವಾಗಿ ನೈಸರ್ಗಿಕ ಕಾರಣಗಳಿಂದ ಕಾಗದಗಳ ಆಯಸ್ಸು ಕ್ಷೀಣಿಸಿ ಹರಿದು ಹಾಳಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಹಳೆಯ ಸುಸ್ಥಿತಿಯಲ್ಲಿಲ್ಲದ ದಾಖಲೆಗಳ ರಕ್ಷಣೆ ಮತ್ತು ಅವುಗಳನ್ನು ಉಳಿಸಿಕೊಳ್ಳಲು ಹಾಗೂ ಪುನರ್ ವ್ಯವಸ್ಥೆಯು ಕಾಲಕಾಲಕ್ಕೆ ಅತ್ಯವಶ್ಯಕವಾಗುತ್ತದೆ. ಇವುಗಳಲ್ಲಿ ಫ್ಯೂಮೀಗೇಷನ್ (ಪ್ರದೂಮೀಕರಣ), ಡಿ-ಆ್ಯಷಿಡಿಫಿಕೇಷನ್ (ಆಮ್ಲೀಕರಣ), ಟಿಷ್ಯೂ  ಲ್ಯಾಮೀನೇಷನ್, ಡಿಜಿಟಲೀಕರಣ ಮತ್ತು COM ಮೂಲಕ ದಾಖಲೆಗಳನ್ನು ಗಣಕೀಕರಣಗೊಳಿಸಿ ಸಂರಕ್ಷಿಸಲಾಗುವ ಮಹತ್ತರವಾದ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.

 

ಪತ್ರಾಗಾರದ ಉಪಯೋಗವನ್ನು ಪಡೆಯುವುದು ಹೇಗೆ? 

        ಪತ್ರಾಗಾರ ಇಲಾಖೆಯ ಸಂಗ್ರಹದಲ್ಲಿರುವ ಐತಿಹಾಸಿಕ ದಾಖಲೆಗಳು, ಸರ್ಕಾರಿ ಆದೇಶ, ರಾಜ್ಯಪತ್ರಗಳು ಸೇರಿದಂತೆ ಎಲ್ಲಾ ಬಗೆಯ ದಾಖಲೆಗಳನ್ನು ಪರಾಮರ್ಶಿಸಲು ಅಥವಾ ನಕಲು ಪ್ರತಿಗಳನ್ನು ಪಡೆಯಬೇಕೆಂದರೆ ಸೇವಾ ಸಿಂಧು ಆನ್ ಲೈನ್ ಮೂಲಕ ನಿಗದಿತ ನಮೂನೆಯಲ್ಲಿ ಇಲಾಖೆಯ ನಿರ್ದೇಶಕರಿಗೆ ಅಥವಾ ಸಂಬಂಧಪಟ್ಟ ಶಾಖೆಯ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುವ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕರಿಂದ ಪರಿಚಯ ಪತ್ರವನ್ನು, ಪಿಹೆಚ್.ಡಿ ನೋಂದಾಯಿತ ಪ್ರತಿಯನ್ನು ಹಾಗೂ ತಮ್ಮ ಇತ್ತಿಚಿನ 2 ಭಾವಚಿತ್ರಗಳೊಂದಿಗೆ ವಿಶ್ವವಿದ್ಯಾಲಯದ ಗುರುತಿನ ಚೀಟಿಯೊಂದಿಗೆ ಪತ್ರಾಗಾರಕ್ಕೆ ದಾಖಲೆಗಳ ಪರಾಮರ್ಶನಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ನಂತರ ನಿರ್ದೇಶಕರ ಒಪ್ಪಿಗೆ ಮೇರೆಗೆ ಸಂಶೋಧಕರಿಗೆ ಪತ್ರಾಗಾರದಲ್ಲಿ ದಾಖಲೆಗಳನ್ನು ಪರಾಮರ್ಶಿಸಲು ಅನುಮತಿ ನೀಡಲಾಗುತ್ತದೆ. ಪತ್ರಾಗಾರ ಇಲಾಖೆಯ ಅಧಿಕಾರಿಗಳ ಸಹಾಯದ ಮುಖೇನ ಸಂಶೋಧಕರು, ಸಾರ್ವಜನಿಕರು ತಮಗೆ ಅಗತ್ಯವಾದ ಕಡತ/ದಾಖಲೆಗಳನ್ನು ಉಪಯೋಗಿಸಬಹುದು ಹಾಗೂ ಪತ್ರಾಗಾರ ಗ್ರಂಥಾಲಯದ ಉಪಯೋಗವನ್ನು ಸಹ ಪಡೆಯಬಹುದು. ಪತ್ರಾಗಾರ ಇಲಾಖೆಯು ಐತಿಹಾಸಿಕ ದಾಖಲೆಗಳು ಅಥವಾ ಅಪ್ರಕಟಿತ ಹಸ್ತಪ್ರತಿಗಳಾಧಾರಿತ ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಿದ್ದು, ಅವುಗಳನ್ನು ಲೆಕ್ಕ ಶಾಖೆಯಲ್ಲಿ ಹಣ ಸಂದಾಯ ಮಾಡುವ ಮೂಲಕ ಪಡೆಯಬಹುದಾಗಿದೆ..

    ಸಾರ್ವಜನಿಕರು ತಮಗೆ ಬೇಕಾದ ಗೆಜೆಟ್ ಪ್ರತಿಯ ಧೃಡೀಕೃತ ನೆರಳಚ್ಚು ಪ್ರತಿಗಳನ್ನು ಅರ್ಜಿ ಸಲ್ಲಿಸಿ ಸಂಬಂಧಿಸಿದ ಅಧಿಕಾರಿಯಿಂದ ಪಡೆಯಬಹುದು. ಇದಕ್ಕೆ ತಗಲುವ ವೆಚ್ಚ 1 ಪುಟಕ್ಕೆ ರೂ.3.00 (ಕನಿಷ್ಠ ರೂ.5.00 ಜೊತೆಗೆ) ರೂ.10.00 ಶೋಧನಾ ವೆಚ್ಚ ಭರಿಸಬೇಕು. ಸಾರ್ವಜನಿಕರಾಗಲಿ ಅಥವಾ ಸಂಶೋಧಕರಾಗಲಿ ಏನಾದರೂ ಕುಂದುಕೊರತೆಯಾದಲ್ಲಿ ನಿರ್ದೇಶಕರು, ಉಪನಿರ್ದೇಶಕರು ಅಥವಾ ಆಯಾ ಶಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಸಹಾಯ ಪಡೆಯಬಹುದು.

 

ಸಾರ್ವತ್ರಿಕ ದಾಖಲೆ ಶಾಖೆ:             

          ಕ್ರಿ.ಶ 1892ರ ನಂತರ ಆಡಳಿತ ವ್ಯವಸ್ಥೆಯಲ್ಲಿ ಕಡತಗಳ ಪದ‍್ಧತಿಯನ್ನು ಜಾರಿಗೆ ತರಲಾಯಿತು. ಒಂದೇ ವಿಷಯದ ಎಲ್ಲಾ ಕಾಗದ ಪತ್ರಗಳನ್ನು ಒಂದೇ ಕಡೆ ಕ್ರೋಢಿಕರಿಸುವುದು ಈ ಪದ್ದತಿಯ ಮುಖ್ಯ ಉದ್ದೇಶವಾಗಿರುತ್ತದೆ. ಸಚಿವಾಲಯದ ಪ್ರತಿ ಇಲಾಖೆಗಳ ಕಡತಗಳ ಶೀರ್ಷಿಕೆ, ಉಪಶೀರ್ಷಿಕೆಗಳ ವಿಷಯಗಳು ಭಿನ್ನವಾಗಿರುತ್ತವೆ (ಅನುಬಂಧದಲ್ಲಿ ನೀಡಿದೆ). ರಾಜ್ಯ ಪತ್ರಾಗಾರ ಇಲಾಖೆ ಆರಂಭವಾಗುವುದಕ್ಕೂ ಪೂರ್ವದಲ್ಲಿ ಸರ್ಕಾರಿ ಸಚಿವಾಲಯದ ಇಲಾಖೆಗಳ ಕಡತಗಳ ಸ್ವೀಕೃತಿ, ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ಸಚಿವಾಲಯದ ಸಾಮಾನ್ಯ ಮತ್ತು ಕಂದಾಯ ಸಚಿವಾಲಯದ ನಿಯಂತ್ರಣದಲ್ಲಿತ್ತು. 1942ರ ನಂತರ ಇದು ಮುಖ್ಯ ಸಚಿವಾಲಯದ ಅಧೀನದಲ್ಲಿಕ್ಕೆ ಬಂದಿತು. 1976ರಲ್ಲಿ ಸಚಿವಾಲಯದ ಇಲಾಖೆಗಳ ಕಡತಗಳ ಸಂರಕ್ಷಣೆ ಹಾಗೂ ಅವುಗಳ ಆಡಳಿತ ನಿರ್ವಹಣೆ ರಾಜ್ಯ ಪತ್ರಾಗಾರ ಇಲಾಖೆಯ ಸುಪರ್ದಿಗೆ ವಹಿಸಲಾಯಿತು. ಕಡತಗಳ ಆಡಳಿತ ನಿರ್ವಹಣೆಯನ್ನು ಸಾಮಾನ್ಯ ಮತ್ತು ಕಂದಾಯ ಸಚಿವಾಲಯ ಕೈಪಿಡಿ, ಅದರ ಪರಿಷ್ಕೃತ ಕೈಪಿಡಿ, ನಂತರ ಪರಿಷ್ಕೃತವಾದ ಸಚಿವಾಲಯ ಕೈಪಿಡಿಯಲ್ಲಿನ ನಿಯಮ, ಉಪನಿಯಮಗಳಿಗೆ ಅನುಸಾರವಾಗಿ ಕ್ರಮವಹಿಸಲಾಗಿದೆ. ಸರ್ಕಾರದ ಮತ್ತು ಅದರ ಅಧೀನಕ್ಕೆ ಒಳಪಡುವ ಎಲ್ಲಾ ಇಲಾಖೆಗಳ ದಾಖಲೆಗಳ ನಿರ್ವಹಣೆಯಲ್ಲಿ ಏಕರೂಪತೆಯನ್ನು ತರುವ ಉದ್ದೇಶಕ್ಕೆ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಹಾಗೂ ನಿಯಮಗಳು 2013ನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಸಚಿವಾಲಯದ ಕಡತಗಳ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಅಧಿನಿಯಮ ಹಾಗೂ ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಲಾಗುತ್ತಿದೆ. 2005ರವರೆಗೂ 29 ಸಚಿವಾಲಯ ಇಲಾಖೆಗಳಿದ್ದವು, ಆ ನಂತರದಲ್ಲಿ ಆಡಳಿತ ವಿಕೇಂದ್ರಿಕರಣವಾಗುತ್ತಾ ಪ್ರಸ್ತುತ 39 ಇಲಾಖೆಗಳಿವೆ.

          ರಾಜ್ಯ ಪತ್ರಾಗಾರ ಇಲಾಖೆಯ ಒಂದು ಶಾಖೆಯಾಗಿ ಸಾರ್ವತ್ರಿಕ ದಾಖಲೆ ಶಾಖೆ ಕರ್ನಾಟಕ ಸರ್ಕಾರಿ ಸಚಿವಾಲಯದ ಎಲ್ಲಾ (39) ಇಲಾಖೆಗಳಲ್ಲಿ ಮುಕ್ತಾಯವಾದ ಚಾಲ್ತಿ ಮತ್ತು ಅರೆಚಾಲ್ತಿ ‘ಸಿ’ ಮತ್ತು ‘ಬಿ’ ವರ್ಗದ ಕಡತಗಳನ್ನು ಸ್ವೀಕರಿಸಿ ಸಂರಕ್ಷಣೆ ಮತ್ತು ಅವುಗಳ ನಿರ್ವಹಣೆಯನ್ನು ಮಾಡುತ್ತಿದೆ. ಸಚಿವಾಲಯದ ಇಲಾಖೆಗಳಿಗೆ ಕಡತಗಳ ಪರಾಮರ್ಶನಕ್ಕೆ ಅಗತ್ಯವಿದ್ದಾಗ ನಮೂನೆ: 03ರ ಪ್ರಪತ್ರದ ಕೋರಿಕೆಯ ಮೇರೆಗೆ ಕಡತಗಳನ್ನು ನೀಡಲಾಗುತ್ತದೆ ಮತ್ತು ನಿಗದಿತ ಕಾಲ ಮಿತಿಯೊಳಗೆ ಅವುಗಳನ್ನು ಹಿಂಪಡೆಯಲಾಗುವುದು. ಸಂರಕ್ಷಣೆಯಲ್ಲಿರುವ ಕಡತಗಳನ್ನು ನಿರ್ದಿಷ್ಟ ಅವಧಿಯ ನಂತರ ಅಂದರೆ ‘ಸಿ’ ವರ್ಗದ ಕಡತಗಳು 10 ವರ್ಷ, ‘ಬಿ’ ವರ್ಗದ ಕಡತಗಳನ್ನು 30ವರ್ಷಗಳ ನಂತರ  ಸಾಮಾನ್ಯ ದಾಖಲೆ ಅಧಿನಿಯಮದನ್ವಯ ಆಯಾ ಇಲಾಖೆಗಳ ಅನುಮತಿಯೊಂದಿಗೆ ಉನ್ನತೀಕರಿಸುವ  ಅಥವಾ ನಾಶಪಡಿಸುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಈ ಹಂತದಲ್ಲಿ ಕೆಲವು ಕಡತಗಳನ್ನು ‘ಸಿ’ ಇಂದ ‘ಬಿ’, ‘ಬಿ’ ಇಂದ ‘ಎ’ ವರ್ಗಕ್ಕೆ ಉನ್ನತೀಕರಿಸಿ ಸಂರಕ್ಷಣೆ ಮಾಡಲಾಗುತ್ತದೆ.

 

ಶಾಖೆಯಲ್ಲಿ ಸಂರಕ್ಷಣೆ ಮಾಡಿರುವ ಕಡತಗಳು.

ಸಿ ವರ್ಗದ ಕಡತಗಳು                               ಒಟ್ಟು=4.65 ಲಕ್ಷ.

ಬಿ ವರ್ಗದ ಕಡತಗಳು                               ಒಟ್ಟು=2.43 ಲಕ್ಷ.

 

2018 ರಿಂದ 2020ರವರೆಗೂ ನಾಶಪಡಿಸಿರುವ ಕಡತಗಳು.

 ಸಿ ವರ್ಗದ ಕಡತಗಳು                               ಒಟ್ಟು=2,18,967 ಲಕ್ಷ 

                                ಬಿ ವರ್ಗದ ಕಡತಗಳು                               ಒಟ್ಟು=ಮೌಲ್ಯಮಾಪನ ಕಾರ್ಯ ಆರಂಭವಾಗಿದೆ.

 

2020ರಲ್ಲಿ ಸಂರಕ್ಷಣೆಗಾಗಿ ಸ್ವೀಕರಿಸಿರುವ ಕಡತಗಳು.

     ಸಿ ವರ್ಗದ ಕಡತಗಳು                               ಒಟ್ಟು= 69,376

ಬಿ ವರ್ಗದ ಕಡತಗಳು                               ಒಟ್ಟು=27.

 

 ಪರಿವೀಕ್ಷಣೆ ಶಾಖೆ: 

            ಪರಿವೀಕ್ಷಣೆ ಶಾಖೆ ನಾಡು-ನುಡಿ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಘ-ಸಂಸ್ಥೆ, ವ್ಯಕ್ತಿಗಳು, ಮಠಮಾನ್ಯಗಳು ಹಾಗೂ ಸರ್ಕಾರಿ ಕಛೇರಿಗಳು, ಬೇರೆ ದೇಶಗಳ, ರಾಜ್ಯಗಳ ಪತ್ರಾಗಾರದಲ್ಲಿ ಇರಬಹುದಾದ  ಐತಿಹಾಸಿಕ ಮಹತ್ವವುಳ್ಳ ದಾಖಲೆಗಳು, ಕಾಗದ ಪತ್ರಗಳು, ಹಸ್ತಪ್ರತಿಗಳು, ಅಪರೂಪದ ಛಾಯಾಚಿತ್ರಗಳು, ಪುಸ್ತಕಗಳು, ಮೋಡಿ ಬರಹದ  ದಾಖಲೆಗಳು, ನಕ್ಷೆಗಳು, ಪ್ರವಾಸಿ ಕಥನಗಳು ಮೊದಲಾದ ಚಾರಿತ್ರಿಕ ಮಹತ್ವದ ದಾಖಲೆಗಳನ್ನು ಇಲಾಖೆಯ  ಅಧಿಕಾರಿ/ನೌಕರರ ತಂಡದೊಂದಿಗೆ ಪರಿಶೀಲಿಸಿ ಇಲಾಖೆಗೆ ಪಡೆದು ದಾಖಲೆಗಳನ್ನು ನೀಡಿದವರ ಹೆಸರಿನಲ್ಲಿ ಸಂರಕ್ಷಣೆ ಮಾಡುವ ಕೆಲಸವನ್ನು ನಿರ್ವಹಿಸುತ್ತಿದೆ. ಇದುವರೆಗೂ 450ಕ್ಕೂ ಹೆಚ್ಚು ಖಾಸಗಿ ವ್ಯಕ್ತಿ /ಸಂಘ-ಸಂಸ್ಥೆಗಳಿಂದ ಹಾಗೂ ಇತರೆ ರಾಜ್ಯಗಳ ಪತ್ರಾಗಾರಗಳಿಂದ ದಾಖಲೆಗಳನ್ನು ಪಡೆದು ಸಂರಕ್ಷಣೆ ಮಾಡಿದೆ (ಅನುಬಂಧದಲ್ಲಿ ನೋಡಿ). ಇಂಡಿಯಾ ಆಫೀಸ್ ಲೈಬ್ರರಿ, ಲಂಡನ್ ಪತ್ರಾಗಾರದಿಂದ ಮೈಸೂರು ರಾಜ್ಯಕ್ಕೆ ಸೇರಿದ ದಾಖಲೆಗಳನ್ನು ಇಲಾಖೆಗೆ ಪಡೆದು ಆ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಓದುಗರಿಗೆ ಅನುಕೂಲ ಮಾಡಿಕೂಡಲಾಗಿದೆ. ಗಣ್ಯ ವ್ಯಕ್ತಿಗಳು, ಆಡಳಿತಗಾರರು, ಸಾಹಿತಿಗಳು, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರ ವೈಯಕ್ತಿಕ ಬರಹಗಳು ಹಾಗೂ ಅವರ ಸಂಗ್ರಹಗಳು ಈ ಶಾಖೆಯ ಸಂಗ್ರಹಣೆಯಲ್ಲಿ ನೋಡ ಸಿಗುತ್ತವೆ. ಇವುಗಳಲ್ಲದೆ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ವಿವಿಧ ಸರ್ಕಾರಿ ಕಛೇರಿಗಳಲ್ಲಿರುವ ಮಹತ್ವದ ದಾಖಲೆಗಳನ್ನು ಗುರುತಿಸಿ ಸಂಗ್ರಹಿಸಲಾಗಿರುವ ಅಮೂಲ್ಯವಾದ ಮತ್ತು ಉಪಯುಕ್ತವಾದ ಹಳೆಯ ಪುಸ್ತಕಗಳು ಮತ್ತು ದಾಖಲಾತಿಗಳು ಇಲ್ಲಿವೆ.

        ಪರಿವೀಕ್ಷಣೆ ಶಾಖೆಯ ಸಂಗ್ರಹ ಕೇವಲ ಲಿಖಿತ ದಾಖಲೆಗಳಿಗೆ ಸೀಮಿತವಾಗಿರದೆ ಮೌಖಿಕ ಧ್ವನಿ ಆಕರಗಳನ್ನು ಸಹ ಐತಿಹಾಸಿಕ ದಾಖಲೆಗಳೆಂದು ಪರಿಗಣಿಸಿ ಸಂಗ್ರಹಿಸುತ್ತಿದೆ. ಈ ಯೋಜನೆಯ ಅಡಿಯಲ್ಲಿ ನಾಡಿನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ಸಾಹಿತ್ಯ ದಿಗ್ಗಜರುಗಳು, ಕಲಾವಿದರು, ಧಿಮಂತ ಆಡಳಿತಗಾರರು, ವಿಜ್ಞಾನಿಗಳು, ರಾಜಕೀಯ ನಾಯಕರು ಹಾಗೂ ನಾಡು-ನುಡಿಗಾಗಿ ದುಡಿದ ಪ್ರಾತಃಸ್ಮರಣೀಯರು, ಮಹನೀಯರುಗಳ ನೆನಪುಗಳನ್ನು ಧ್ವನಿಸುರುಳಿಯಲ್ಲಿ ಸಂಗ್ರಹಿಸಿ, ಮೌಖಿಕ ಇತಿಹಾಸದ ರೂಪದಲ್ಲಿ ನಾಳಿನ ಪೀಳಿಗೆಗೆ ಕಾಯ್ದಿರಿಸಲಾಗಿದೆ. ಈ ಸಂಗ್ರಹದಲ್ಲಿ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಎಸ್ ನಿಜಲಿಂಗಪ್ಪ, ಕರ್ನಾಟಕದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಶ್ರೀ ನಿಟ್ಟೂರು ಶ್ರೀನಿವಾಸರಾಯರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶಿವರಾಮ ಕಾರಂತರು, ಭಾರತದ ಹಿಂದಿನ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ ಜತ್ತಿ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಂ.ಎನ್ ಜೋಯಿಸ್ ಮುಂತಾದವರ ಧ್ವನಿ ಸಂಗ್ರಹಗಳಿವೆ. ಶಾಖೆಯು ಈವರೆವಿಗೂ ಸುಮಾರು 120 ಗಣ್ಯರ ಮೌಖಿಕ ಧ್ವನಿ ಇತಿಹಾಸವನ್ನು ಸಂಗ್ರಹಿಸಿದೆ. ಅದರಲ್ಲಿ 63 ಧ್ವನಿ ಸಂಗ್ರಹಗಳನ್ನು ಇಲಾಖೆಯ ಅಂತರ್ಜಾಲ ತಾಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲಾಗಿದೆ.

        ಈ ಐತಿಹಾಸಿಕ ದಾಖಲೆಗಳ ಸಂಗ್ರಹ ಸಂರಕ್ಷಣೆಯ ಜೊತೆಗೆ ಆಯ್ದ ಅತ್ಯಮೂಲ್ಯ ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಅಲ್ಲದೇ ದಾಖಲೆಗಳ ಸಂಗ್ರಹ ಸಂರಕ್ಷಣೆಯಲ್ಲಿ ಸಾರ್ವಜನಿಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮತ್ತು ದಾಖಲೆಗಳ ಬಗೆಗೆ ಅರಿವು ಮೂಡಿಸುವ ಮಹತ್ತರ ಉದ್ಧೇಶಕ್ಕಾಗಿ ಪದವಿ ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಪದವಿ ಪೂರ್ವ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪತ್ರಾಗಾರ ಕೂಟ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿದೆ.

 

  ಬಿಡಿಪ್ರತಿ ಶಾಖೆ: 

        ಬಿಡಿಪ್ರತಿ ವಿಭಾಗದಲ್ಲಿ ಅದರ ಹೆಸರೇ ಸೂಚಿಸುವಂತೆ ಇಲಾಖೆಯ ಇನ್ನಿತರ ಶಾಖೆಗಳಲ್ಲಿರುವ ಅನೇಕ ಮಹತ್ವದ ದಾಖಲೆಗಳು ಮತ್ತು ಆದೇಶಗಳ ಹೆಚ್ಚುವರಿ ಪ್ರತಿಗಳನ್ನು ಇಲ್ಲಿ ಸಂಗ್ರಹಿಸುವ ಪರಿಪಾಠವನ್ನು ಹೊಂದಲಾಗಿದೆ. ಇಲ್ಲಿ ಕರ್ನಾಟಕ ಸರ್ಕಾರದ ಸಚಿವಾಲಯದ ಸರ್ಕಾರಿ ಆದೇಶಗಳು, ಅಧಿಸೂಚನೆಗಳು, ವೇತನ ಆಯೋಗದ ವರದಿಗಳು, ಮನವಿಗಳು, ಮೈಸೂರು ಸಂಸ್ಥಾನ, ಹೈದ್ರಾಬಾದ್ ಸಂಸ್ಥಾನ, ಮದ್ರಾಸ್ ಪ್ರೆಸಿಡೆನ್ಸಿ, ಬಂಗಾಲ್ ಹಾಗೂ ಇತರೆ ಸಂಸ್ಥಾನಗಳ ಕೋಡ್ ಗಳನ್ನು, ಮೈಸೂರು ಸಂಸ್ಥಾನದ ಆಡಳಿತ, ಶಿಕ್ಷಣ, ಸೇವೆ, ಆರ್ಥಿಕ ವರದಿಗಳು, ಆಯವ್ಯಯದ ಭಾಷಣಗಳ ಮೇಲೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಿವಿಧ ಸಚಿವರುಗಳು ಮಾಡಿರುವ ಭಾಷಣಗಳನ್ನು, ಪೊಲೀಸ್ ಇಲಾಖೆಯ ತನಿಖಾ ವರದಿಗಳು, ಸರ್ಕಾರದ ವಿವಿಧ ಇಲಾಖೆಗಳ ವಾರ್ಷಿಕ ವರದಿಗಳನ್ನು ಸಂರಕ್ಷಿಸಲಾಗುತ್ತಿದೆ. ಹೀಗೆ ಹತ್ತಾರು ಮಹತ್ವದ ದಾಖಲೆಗಳನ್ನು ಬಿಡಿಪ್ರತಿ ಶಾಖೆಯಲ್ಲಿ ಶೇಖರಿಸಿಡಲಾಗಿದ್ದು, ಸಾರ್ವಜನಿಕ ಉಪಯೋಗಕ್ಕೆ ಅವುಗಳನ್ನು ಮುಕ್ತವಾಗಿಸಿದೆ.

 

ಗ್ರಂಥಾಲಯ: 

 

               ಇಲಾಖೆಯ ಗ್ರಂಥಾಲಯವು 25,000ಕ್ಕೂ ಅಧಿಕ ಅಪರೂಪದ ಪುಸ್ತಕಗಳ ಸಂಗ್ರಹವನ್ನು ಹೊಂದಿದ್ದು. ಐತಿಹಾಸಿಕ, ಸಾಮಾಜಿಕ,ಆಡಳಿತಾತ್ಮಕ ಹಾಗೂ ಶಾಸನ ಸಭೆಯ ಚರ್ಚೆಗಳು ಮತ್ತು ಸಮಿತಿಯ      ವರದಿಗಳು  ,ಮೈಸೂರು ರಾಜ್ಯದ ಆಡಳಿತಾತ್ಮಕ ವರದಿಗಳು, ಜನಸಂಖ್ಯಾ ವರದಿಗಳು ಹಾಗೂ ಇತರೆ ಇಲಾಖೆಯ ವರದಿಗಳು ಮುಂತಾದ ಅಪರೂಪದ ಪುಸ್ತಕಗಳನ್ನು ಸಂರಕ್ಷಿಸಲಾಗುತ್ತಿದೆ. ಸಂಶೋಧಕರು, ಇತಿಹಾಸ ತಜ್ಞರು, ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪರಾಮರ್ಶನೆ ಮಾಡಿ ಮಾಹಿತಿಯನ್ನು ಪಡೆಯುತ್ತಾರೆ. ಗ್ರಂಥಾಲಯದಲ್ಲಿರುವ ಕೆಲವು ಸಂಶೋಧನಾತ್ಮಕ ಪುಸ್ತಕಗಳನ್ನು ಡಿಜಿಟಲಿಕರಣಗೊಳಿಸಿ ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

 

ಪ್ರತಿರೂಪೀಕರಣ ಶಾಖೆ (ಸೂಕ್ಷ್ಮ ಚಿತ್ರಘಟಕ): 

      ಕರ್ನಾಟಕ ರಾಜ್ಯ ಪತ್ರಾಗಾರದ ಸೂಕ್ಷ್ಮಚಿತ್ರ ಘಟಕದಲ್ಲಿ ಅಂದಾಜು 18ಲಕ್ಷಕ್ಕೂ ಹೆಚ್ಚಿನ ಐತಿಹಾಸಿಕ ಮಹತ್ವದ ದಾಖಲೆಗಳನ್ನು ಸೂಕ್ಷ್ಮ ಚಿತ್ರಸುರುಳಿಗಳಲ್ಲಿ ಸಂರಕ್ಷಿಸಿದೆ. ಇದರಲ್ಲಿ ಪ್ರಮುಖವಾಗಿ ಹಳೆಯ ಸುದ್ದಿಪತ್ರಿಕೆಗಳು, ಖಾಸಗಿ ಸಂಗ್ರಹಗಳು, ಗೆಜೆಟ್‍ಗಳು ಹಾಗೂ ನಡವಳಿಗಳಿವೆ. ಸಂಶೋಧಕರು, ಇತಿಹಾಸಕಾರರು ಹಾಗೂ ಇತರೆ ಇಲಾಖೆಯವರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

 

ಚಾರಿತ್ರಿಕ ದಾಖಲೆ ಶಾಖೆ: 

 

      ಕರ್ನಾಟಕ ರಾಜ್ಯ ಪತ್ರಾಗಾರವು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಗಣಿಯೇ ಆಗಿದೆ. ಮೈಸೂರಿನ ಇತಿಹಾಸವನ್ನು ವಿಶೇಷವಾಗಿ ಮೈಸೂರಿನಲ್ಲಿ ಬ್ರಿಟಿಷ್ ಆಡಳಿತದ ಸ್ಥಾಪನೆ, ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸ್ ನ ಪ್ರಯತ್ನಗಳು ಮತ್ತು ಏಕೀಕರಣ ಚಳುವಳಿ ಮುಂತಾದವುಗಳಿಗೆ ಸಂಬಂಧಿಸಿದ ಆಧಾರ ಮಾಹಿತಿಗಳನ್ನು ಒಳಗೊಂಡ ದಾಖಲೆಗಳನ್ನು ಹೊಂದಿದೆ. ಇವುಗಳ ಜೊತೆಗೆ 1866ರಿಂದ ಈಗಿನ ರಾಜ್ಯಪತ್ರ (ಗೆಜೆಟ್)ಗಳು ಸಹ ಲಭ್ಯವಿದೆ. ಹೆಚ್ಚಿನ ದಾಖಲಾತಿಗಳು ಇಂಗ್ಲೀಷ್ ನಲ್ಲಿದ್ದು. ಕೆಲವು ಕನ್ನಡದಲ್ಲೂ ಇವೆ.

 

      ಇಲಾಖೆಯು ಪ್ರಮುಖವಾಗಿ ವಿಷಯವಾರು ದಾಖಲೆಗಳ ಪಟ್ಟಿ, ಸೂಚಿಗಳು, ಗೈಡ್ಸ್ ಇತ್ಯಾದಿ ವಿವಿಧ ಸಾಧನ ಸಹಾಯಕಗಳನ್ನು ತಯಾರಿಸಿದೆ. ಹಲವು ಪ್ರಮುಖ ಆಯ್ದ ಐತಿಹಾಸಿಕ ಮೌಲ್ಯವುಳ್ಳ ದಾಖಲೆಗಳ ಪ್ರಕಟಣಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಈ ದಿಸೆಯಲ್ಲಿ ಈಗಾಗಲೇ ಅನೇಕ ಪತಸ್ತಕಗಳನ್ನು ಪ್ರಕಟಣಾ ರೂಪದಲ್ಲಿ ತರಲಾಗಿದೆ. ಅವುಗಳು ಮಾರಾಟಕ್ಕಿವೆ ಹಾಗೂ ರಾಜ್ಯದಾದ್ಯಂತ ಸರ್ಕಾರಿ ಗ್ರಂಥಾಲಯಗಳಲ್ಲಿ ಅವುಗಳನ್ನು ಸಾರ್ವಜನಿಕರ ಮತ್ತು ವಿದ್ವಾಂಸರ ಆಕರ ಉಪಯೋಗಕ್ಕಾಗಿ ಇಡಲಾಗಿದೆ.

 

ವಿಭಾಗೀಯ ಪತ್ರಾಗಾರ ಮೈಸೂರು: 

 

          ರಾಜ್ಯ ಪತ್ರಾಗಾರ ಇಲಾಖೆಯ ಅಧೀನ ಕಛೇರಿಯಾಗಿ 1984ರಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಇದು 2006ರವರೆಗೆ ಮೈಸೂರು ಅರಮನೆಯ ಗಾಯತ್ರಿ ದೇವಸ್ಥಾನದ ಆವರಣದಲ್ಲಿ ಕಾರ್ಯನಿರ್ವಹಿಸಿದ್ದು, ನಂತರ 2006ರಿಂದ ಪ್ರತ್ಯೇಕವಾಗಿ ತನ್ನದೇ ಆದ ಕಟ್ಟಡವನ್ನು ಹೊಂದಿತು. ಪ್ರಸ್ತುತ ಸದರಿ ಕಚೇರಿಯು ಸಂಖ್ಯೆ:15/ಡಿ ಇಂಡಸ್ಟ್ರಿಯಲ್ ಸಬರ್, ವಿಶ್ವೇಶ್ವರ ನಗರ, ಮೈಸೂರು ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.

 

      ಮೈಸೂರು ರಾಜಮನೆತನದ ದಿನನಿತ್ಯದ ಅರಮನೆ ಆಡಳಿತಕ್ಕೆ ಸಂಬಂಧಪಟ್ಟ ದಾಖಲೆಗಳು, ಮಹಾರಾಜರ ಸರ್ಕಾರದ ಹಾಗೂ ಮೈಸೂರು ಸರ್ಕಾರದ ದಾಖಲೆಗಳನ್ನು ಪತ್ರಾಗಾರ ಇಲಾಖೆಯು ಪರಿವೀಕ್ಷಣೆ ಮಾಡಿ ಸಂಗ್ರಹಣೆ ಮಾಡುವ ಮೂಲಕ ಸುಮಾರು 140 ವರ್ಷಗಳ ಇತಿಹಾಸವುಳ್ಳ ಮೈಸೂರು ಆಡಳಿತದ ದಾಖಲೆಗಳನ್ನು ಪಡೆದು ಜೊತೆಗೆ ಮೈಸೂರು ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಮೂಲಗಳಿಂದ ಚಾರಿತ್ರಿಕ ಮಹತ್ವವುಳ್ಳ ದಾಖಲೆಗಳ ಪರಿವೀಕ್ಷಣೆ, ಸಂಗ್ರಹಣೆ ಮತ್ತು ಸಂರಕ್ಷಣೆ ಕಾರ್ಯಗಳನ್ನು ನಿರ್ವಹಿಸುತ್ತಿದೆ.

 

    ಇಲ್ಲಿ 1869ರಿಂದ 1950ರವರೆಗೆ ಲಭ್ಯವಿರುವ ವಿವಿಧ ಇಲಾಖೆಗಳ ದಾಖಲೆ ವಿವರಗಳು ಹೀಗಿದೆ. ಅವಸರದ ಹೋಬಳಿ, ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ, ಪ್ಯಾಲೇಸ್ ಬ್ಯಾಂಡ್, ಬೆಂಗಳೂರು ಪ್ಯಾಲೇಸ್, ಬಾಡಿ ಗಾರ್ಡ್, ಚಾಮುಂಡಿ ಜಮಾಖಾನ, ಚಾಮುಂಡಿ ತೊಟ್ಟಿ, ಚಾಮರಾಜೇಂದ್ರ ಅರಸು ಬೋರ್ಡಿಂಗ್ ಸ್ಕೂಲ್, ಚಾಮರಾಜೇಂದ್ರ ಜೂ ಗಾರ್ಡನ್, ಚಿತ್ರಶಾಲಾ, ಪ್ಯಾಲೇಸ್ ಡಿಸ್ಪೆನ್ಸರಿ, ದಸರಾ, ಡೊನೇಷನ್ ಅಂಡ್ ಅನರ್ಸ್, ಎಲೆಕ್ಟ್ರಿಕಲ್, ಪ್ಯಾಲೇಸ್ ಎಸ್ಟೇಟ್ ಅಂಡ್ ಗಾರ್ಡನ್ಸ್, ಫರಶ್ ಖಾನಾ, ಫರ್ನ್ ಹಿಲ್ ಪ್ಯಾಲೇಸ್, ಗಜಶಾಲಾ,ಗೇಮ್ಸ್ ಅಂಡ್ ಟೈಗರ್ ಪ್ರಿಸರ್ವ್ಸ್, ಪ್ಯಾಲೇಸ್ ಗ್ಯಾರೇಜ್, ಜನರಲ್ ಆಫೀಸ್, ಕರೋಹಟ್ಟಿ, ಖಾಂಗಿ, ಖಾಸ ಸಮುಖ, ಖಿಲ್ಲಿ ಕಛೇರಿ, ಮಹಾರಾಜಾಸ್ ಓನ್ ಇನ್ ಫ್ಯಾಂಟ್ರಿ, ಜಯಲಕ್ಷ್ಮೀ ವಿಲಾಸ ಸನ್ನಿಧಾನಂ, ಚೆಲುವಾಂಬ ವಿಲಾಸ ಸನ್ನಿಧಾನಂ, ಪ್ಯಾಲೇಸ್ ಮರಾಮತ್, ಪ್ಯಾಲೇಸ್ ಮೋತಿಖಾನ್, ಪ್ಯಾಲೇಸ್ ಮುಜರಾಯಿ, (A) ಪ್ಯಾಲೇಸ್ ಕಂಟ್ರೋಲರ್ ಆಫೀಸ್ (B) ಪ್ಯಾಲೇಸ್ ಆಫೀಸ್, ಕಾರಂಜಿ ಮ್ಯಾನ್ಷನ್, ರಾಯನಕೆರೆ ಡೈರಿ ಫಾರಂ,  ಪ್ಯಾಲೇಸ್ ಸ್ವೇಬಲ್ಸ್, ಪ್ಯಾಲೇಸ್ ಟ್ರೆಜರಿ, ವಾಣಿ ವಿಲಾಸ ಅರಸು ಗರ್ಲ್ಸ್ ಸ್ಕೂಲ್, ಜನನ ಸಮುಖ, ಜಿಲ್ಲೋ ಕಛೇರಿ ಇತ್ಯಾದಿಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

 

ಪ್ರಾದೇಶಿಕ ಪತ್ರಾಗಾರ-ಧಾರವಾಡ:

 

        ಬೆಳಗಾವಿ ವಿಭಾಗದ ಪತ್ರಾಗಾರ ಕಛೇರಿಯನ್ನು 1986ರಲ್ಲಿ ಧಾರವಾಡದಲ್ಲಿ ಸ್ಥಾಪಿಸಲಾಯಿತು. ಆರಂಭದಲ್ಲಿ ಇದು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಇಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಪ್ರಸ್ತುತ ಈ ಕಛೇರಿಯು ವಿಶ್ವವಿದ್ಯಾಲಯದ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಕೇಂದ್ರದ ಹಿಂಭಾಗದಲ್ಲಿ 2020ರಿಂದ ಸ್ವಂತ ಕಟ್ಟಡವನ್ನು ಹೊಂದಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕ ಅಥವಾ ಖಾಸಗಿ ದಾಖಲೆಗಳ ಬೃಹತ್ ಸಂಗ್ರಹಗಳು ಈ ಕಛೇರಿಗಳಲ್ಲಿ ಲಭ್ಯವಿದ್ದು, ಆ ಪ್ರದೇಶಕ್ಕೆ ಸಂಬಂಧಿಸಿದ ಮಹತ್ವದ ಖಾಸಗಿ ಕಾಗದ ಪತ್ರಗಳನ್ನು ವ್ಯಕ್ತಿಗಳಿಂದ ಮತ್ತು ಖಾಸಗಿ ಸಂಸ್ಥೆಗಳಿಂದ ಸಂಗ್ರಹಿಸಿ ಸಂರಕ್ಷಿಸಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 27-04-2021 02:53 PM ಅನುಮೋದಕರು: DIRECTOR-KSA


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080